ಕೌಟಿಲ್ಯನ ಅರ್ಥಶಾಸ್ತ್ರ

ಕೌಟಿಲ್ಯನು ಪ್ರಾಚೀನ ವಿಶ್ವದಲ್ಲಿಯೇ ಪ್ರಥಮ ವೈಜ್ಞಾನಿಕ ಎನ್ನಬಹುದಾದ ರಾಜ್ಯಾಡಳಿತ ನಿರ್ದೇಶಕ ಕೋಶವನ್ನು ರಚಿಸಿದನು.ಸಾಮ್ರಾಜ್ಯ ಷಾಹಿತ್ವದ ಲಕ್ಷಣಗಳು, ಸಾಮ್ರಾಜ್ಯ ಷಾಹಿತ್ವದ ಒಳಿತು ಮುಂತಾದವುಗಳ ಬಗ್ಗೆ ಮಾಹಿತಿ ನೀಡುವಂತಹ ಪ್ರಾಚೀನ ಭಾರತದ ಪ್ರಪ್ರಥಮ ವ್ಯವಸ್ಥಿತ ಕೋಶ.ಈ ಗ್ರಂಥದ ಮೂಲಕ ನಾವು ಸಮಕಾಲಿನ ರಾಜಕೀಯ ಆರ್ಥಿಕ ಸಿದ್ದಾಂತಗಳು ಮತ್ತು ಈ ಸಿದ್ದಾಂತಗಳಿಗೆ ಕಾರಣವಾದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

"ಭೂಮಿಯನ್ನು ಪಡೆದು ಪರಿಪಾಲಿಸುವ ಶಾಸ್ತ್ರವನ್ನು ವಿವರಿಸುವುದೇ ಅರ್ಥಶಾಸ್ತ್ರ" ಎಂಬುದಾಗಿ ಕೌಟಿಲ್ಯನೇ ಅರ್ಥಶಾಸ್ತ್ರದ ವ್ಯಾಖ್ಯಾನವನ್ನು ಕೊಟ್ಟಿದ್ದಾನೆ ಈ ಕೃತಿಗೆ 'ದಂಡನೀತಿ','ರಾಜದಂಡಶಾಸ್ತ್ರ','ಸರ್ಕಾರ ರಚನಾ ಶಾಸ್ತ್ರ' ಎಂಬ ಹೆಸರುಗಳು ಸಹ ಇವೆ. ಅರ್ಥಶಾಸ್ತ್ರದ ಕರ್ತೃವಾದ ಕೌಟಿಲ್ಯನಿಗೆ ವಿಷ್ಣುಗೋಪ,ವಾತ್ಸಾಯನ,ದ್ರಾವಿಡಾಚಾರ್ಯ,ಚಾಣಕ್ಯ ಎಂಬ ಹೆಸರುಗಳು ಇದ್ದವು. ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಪಡೆದ ಈತನ ಕೃತಿಯಾದ ಅರ್ಥಶಾಸ್ತ್ರವು ಸಂಸ್ಕೃತ ಸಾಹಿತ್ಯದಲ್ಲಿಯೆ ಅದ್ವಿತೀಯವಾದುದು.

ಬಹುಕಾಲದವರೆಗೂ ಅಗೋಚರವಾಗಿದ್ದ ಈ ಮಹಾನ್ ಕೃತಿಯನ್ನು ಬೆಳಕಿಗೆ ತಂದ ಕೀರ್ತಿ ಮೈಸೂರಿನ ಓರಿಯಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿದ್ದ ಡಾ. ಶಾಮಶಾಸ್ತ್ರಿಯವರಿಗೆ ಸಲ್ಲುತ್ತದೆ ಇವರು ೧೯೦೫ರಲ್ಲಿ ಯಾವುದೋ ಸಂಶೋಧನೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಈ ಕೃತಿಯು ಅವರ ಕೈ ಸೇರಿ ಅವರಿಂದ ಬೆಳಕಿಗೆ ಬಂದಿತು.

ಅರ್ಥಶಾಸ್ತ್ರವು ೧೫ ಅಧಿಕರಣಗಳು,೧೮೦ ಪ್ರಕರಣಗಳು ೬೦೦೦ ಶ್ಲೋಕಗಳನ್ನು ಹೊಂದಿರುವ ಈ ಕೃತಿ ವಿಸ್ತೃತ ವಿವರಣಾತ್ಮಕ ಸ್ವರೂಪದಲ್ಲಿ ಗೇಯವಾಗಿ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಈ ಕೃತಿ ರೂಪಿತಗೊಂಡಿದೆ. ಇದು ಮೂಲಪಾಠದ ಮೇಲೆ ಕೃತಿಕಾರನ ಸ್ವಂತ ವಿಮರ್ಶೆಯನ್ನು ನೀಡುತ್ತದೆಯಾದ ಕಾರಣದಿಂದ ಈ ಕೃತಿಯು ಏಕಕಾಲದಲ್ಲಿ ಸೂತ್ರ ಹಾಗೂ ಭಾಷ್ಯದ ಲಕ್ಷಣಗಳನ್ನು ಹೊಂದಿದೆ ಈ ಕೃತಿಕಾರನು 'ಶಾಂತಿ ಪರ್ವ'ದಿಂದ ಹೆಚ್ಚು ಪ್ರಭಾವ ಹೊಂದಿರುವುದು ಕಂಡುಬರುತ್ತದೆ.

ಅರ್ಥಶಾಸ್ತ್ರದ ಪ್ರಥಮ ಅಧಿಕರಣವು ರಾಜಕುಮಾರರಿಗೆ ನೀಡಬೇಕಾದ ಶಸ್ತ್ರಾಸ್ತ್ರ ತರಬೇತಿ,ಯುವರಾಜ ಹಾಗೂ ರಾಜಕುಮಾರರಿಗೆ ಬರಬಹುದಾದ ದುಷ್ಚಟಗಳು, ಮಿತ್ರಕೂಟ, ರಾಜಕುಮಾರರಲ್ಲಿ ಪ್ರೇರೆಪಿಸಬೇಕಾದ ಗುಣಲಕ್ಷಣಗಳ ಬಗ್ಗೆ ತಿಳಿಸುತ್ತದೆ. ದ್ವೀತಿಯ ಅಧಿಕರಣದಲ್ಲಿ ರಾಜಕುಮಾರರು ಹಾಗೂ ಸರಕಾರದ ಇತರ ಅಧಿಕಾರಿಗಳು,ಮಂತ್ರಿಗಳ ಕಂದಾಯ ವಸೂಲಾತಿ ಮತ್ತು ವೆಚ್ಚ ವ್ಯವಸ್ಥೆ ನ್ಯಾಯಿಕಾಧಿಕಾರಿಗಳು,ನಗರಗಳು ಮತ್ತು ರಾಜಧಾನಿಯ ಆಡಳಿತ ನಿಯಂತ್ರಣದ ಕುರಿತು ವಿವರಿಸಲಾಗಿದೆ.

ಮೂರನೆಯ ಅಧಿಕರಣವು ರಾಜ್ಯದಲ್ಲಿರಬೇಕಾದ ನ್ಯಾಯಾಡಳಿತ ವ್ಯವಸ್ಥೆಯ ಕುರಿತು ಹೇಳುತ್ತದೆ.

ನಾಲ್ಕನೇ ಅಧಿಕರಣವು ಪ್ರಜೆಗಳು ನಡೆಸುವ ಅಪರಾಧಗಳ ಪರಿಚಯ ಇದೆ. ನಕಲಿ ನಾಣ್ಯ ಪದ್ದತಿಯ ಅಪರಾಧವು ಆ ಕಾಲದಲ್ಲಿಯೇ ಪರಿಚಿತವಾಗಿತ್ತು. ಈ ಭಾಗದಲ್ಲಿ ಕೌಟಿಲ್ಯನು ನೈಸರ್ಗಿಕ ವಿಕೋಪಗಳಾದ ನೆರೆ,ಬರ,ರೋಗ ರುಜಿನಗಳ ಕುರಿತು ವಿಸ್ತೃತ ಮಾಹಿತಿ ನೀಡುತ್ತಾನೆ.

ಅರ್ಥಶಾಸ್ತ್ರದ ಐದನೇ ಅಧಿಕರಣವು ರಾಜ್ಯದ ವಿರುದ್ದ ಉಂಟಾಗಬಹುದಾದ ಭಯೋತ್ಪಾದನೆ, ದೊಂಬಿ ಮುಂತಾದ ಆಂತರಿಕ ಅಪಾಯಗಳ ಕುರಿತು ತಿಳಿಸುತ್ತಾನೆ. ರಾಜ್ಯದ ಆದಾಯವನ್ನು ನಾಶ ಮಾಡಲು ಪ್ರಯತ್ನಿಸುವ ಪಂಗಡಗಳು ಅವುಗಳ ವಿರುದ್ಧ ಹೋರಾಡಿ ರಾಷ್ಟ್ರೀಯ ಕಂದಾಯವನ್ನು ಹೆಚ್ಚಿಸಬೇಕಾದುದರ ಅಗತ್ಯವನ್ನು ಕೌಟಿಲ್ಯತಿಳಿಸುತ್ತಾನೆ.

ಆರನೇ ಅಧಿಕರಣದಲ್ಲಿ ರಾಜ್ಯೋತ್ಪನ್ನದ ಕುರಿತಾದ 'ಸಪ್ತಾಂಗವಾದ'ವನ್ನು ಮಂಡಿಸಲಾಗಿದೆ. 'ಸ್ವಾಮೀ,ಅಮಾತ್ಯ,ಜನ,ದುರ್ಗ,ಕೋಶ ದಂಢ ಹಾಗೂ ಮಿತ್ರ'ರೆಂಬ ಏಳು ಅಂಗಗಳ ಸುಮಧುರ ಸಂಯೋಜನೆ ಸಾಧ್ಯವಾದಾಗ ರಾಜ್ಯ ನಿರ್ಮಾಣ ಕ್ರಿಯೆಯಲ್ಲಿ ಅತ್ಯಗತ್ಯವಾದರೂ ಮೊದಲನೆಯ ಅಂಗವು ನಂತರ ಬರುವ ಅಂಗಗಳಿಗಿಂತ ಪ್ರಮುಖ. ಸ್ವಾಮಿಯು ಉಳಿದೆಲ್ಲಾ ಅಂಗಕ್ಕಿಂತ ಪ್ರಮುಖ ಅಂಗ ಎಂದು ತಿಳಿಯುವುದು ಇಲ್ಲಿಯ ಸೂತ್ರವಾಗಿದೆ. ಈ ಅಧಿಕರಣದಲ್ಲಿಯೇ ಚಾಣಕ್ಯನು ರಾಜ್ಯದಲ್ಲಿ ಉಂಟಾಗುವ ಆರು ತೆರನಾದ ರಾಜಕೀಯ ಪರಿಸ್ಥಿತಿಗಳ(ಶಾಂತಿ, ಯುದ್ದ,ದಂಡಯಾತ್ರೆ, ತಾಟಸ್ಥ್ಯ,ವಿವಿಧ ಯುದ್ದ ನೀತಿ ಹಾಗೂ ವಿಶಾಲ ಯುದ್ದ ನೀತಿ)ಕುರಿತು ಹೇಳುತ್ತಾನೆ.

ಏಳನೇಯ ಅಧಿಕರಣದಲ್ಲಿ ರಾಜಕುಮಾರನು ವಿಜಿಘೀಷು ಆಗಲು ಕೈಗೊಳ್ಳಬೇಕಾದ ಕ್ರಮಗಳನ್ನು ಹಾಗೂ ರಾಜಕುಮಾರರ ಪ್ರಯತ್ನಕ್ಕೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುವ ಕುರಿತು ತಿಳಿಸಲಾಗಿದೆ.

ಎಂಟನೇಯ ಅಧಿಕರಣವು ಸಾಮ್ರಾಜ್ಯ ವಿನಾಶ ಉಂಟು ಮಾಡುವ ಎರಡು ತೆರನಾದ ಸಮಸ್ಯೆಗಳ ಕುರಿತು ತಿಳಿಸುತ್ತದೆ.೧ಯಾರ ನಿಯಂತ್ರಣಕ್ಕೂ ದೊರಕದ ನೈಸರ್ಗಿಕ ವಿಕೋಪಗಳು ೨ರಾಜಕುಮಾರನ ಅನೈತಿಕ ಬದುಕು ಮತ್ತು ಅಸಮರ್ಥ ಆಡಳಿತದ ಫಲದಿಂದ ಉಂಟಾಗುವ ಸಮಸ್ಯೆಗಳು.

ಒಂಭತ್ತನೆಯ ಅಧಿಕರಣ ಯುವರಾಜನು ಮಾಡಿಕೊಳ್ಲಬೇಕಾದ ಯುದ್ದ ಸಿದ್ಧತೆಗ ಹಾಗೂ ದಂಡಯಾತ್ರೆಯ ಪೂರ್ವತಯಾರಿಯ ವಿವರಣೆ ಇದೆ.

ಹತ್ತನೆಯ ಅಧಿಕರಣವು ಯುದ್ದಕಾಲದ ಕಷ್ಟನಷ್ಟಗಳು,ರಾಜಧಾನಿಯಲ್ಲಿ ಕಾವಲು ಇಡಬೇಕಾದ ಮಾಹಿತಿಯಿದೆ.

ಹನ್ನೊಂದನೇ ಅಧಿಕರಣವು ಒಬ್ಬ ಆಕ್ರಮಣಕಾರಿಯು ಸಂಘ ಹಾಗೂ ಗಣತಂತ್ರಗಳನ್ನು ಸದೆವಡಿಯುವುದರ ಅಗತ್ಯ ಹಾಗೂ ವ್ಯಾಪಾರೀ ಶ್ರೇಣಿಯನ್ನು ನಿಯಂತ್ರಿಸುವುದರ ಕುರಿತು ಹೇಳುತ್ತದೆ.

ಹನ್ನೆರಡನೇ ಅಧಿಕರಣವು 'ಶಕ್ತಿಗಿಂತಲೂ ಯುಕ್ತಿ ಉಪಯುಕ್ತ'ಎನ್ನುವ ತತ್ವದಡಿಯಲ್ಲಿ ದುರ್ಬಲ ರಾಜನು ಹೇಗೆ ಶಕ್ತರಾಜರನ್ನು ಸದೆಬಡಿಯಬಹುದು ಎನ್ನುವುದನ್ನು ಚರ್ಚಿಸುತ್ತದೆ.

ಹದಿಮೂರನೆಯ ಅಧಿಕರಣವು ಶತ್ರು ದೊರೆಯಬಲಯುತ ಕೋಟೆಯನ್ನು ಹೇಗೆ ಕುಟಿಲತೆಯಿಂದ ಮುರುಯಬಹುದು ಎಂಬುದರ ಚಿತ್ರಣವಿದೆ.

ಹದಿನಾಲ್ಕನೆಯ ಅಧಿಕರಣವು ಮಾಟ ಮಂತ್ರಾದಿ ವಿಪರೀತ ವಿಧಾನಗಳಿಂದ ಗೌಪ್ಯ ರೀತಿ ನೀತಿಗಳಿಂದ ಶತ್ರು ದಮನದ ಕುರಿತು ತಿಳಿಸುತ್ತದೆ. ಹೀಗೆ ಅರ್ಥಶಾಸ್ತ್ರ ಸುವ್ಯವಸ್ಥಿತವಾದ ಕಾರ್ಯಾಡಳಿತ ತರಬೇತಿ ಹಾಗೂ ಇತಿಹಾಸ ವಿದ್ಯರ್ಥಿಗೆ ಮೌರ್ಯವಂಶದ ಕುರಿತು ಮಾಹಿತಿ ನೀಡುವ ಆಕರವಾಗಿದೆ.