• ಟಿಪ್ಪು ಸುಲ್ತಾನ್;ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಡುತ್ತಾ* ....

ಟಿಪ್ಪು ಸುಲ್ತಾನ್ ಬಗ್ಗೆ ಸಂಶೋಧನೆ ಮಾಡಿ, ಪುಸ್ತಕ ಬರೆಯಲು ಹೊರಟ ಭಗವಾನ್ ಗಿಡ್ವಾಣಿ ಎಂಬ ಹಿಂದೂ ಮಹಾಸಭಾ ನಾಯಕ ಅದಕ್ಕಾಗಿ ಲಂಡನ್ನಿನ ಪ್ರಾಚ್ಯವಸ್ತು ಇಲಾಖೆ ಸಂಗ್ರಹಗಳನ್ನು ಮತ್ತು ದಾಖಲೆಗಳನ್ನು ಹುಡುಕಿದರು. ಎಲ್ಲ ತಡಕಾಡಿದ ನಂತರ ಟಿಪ್ಪು ಬಗ್ಗೆ ತುಂಬಾ ಗೌರವ ಭಾವನೆ ವ್ಯಕ್ತಪಡಿಸಿ, 'ಟಿಪ್ಪು ಖಡ್ಗ' ಎಂಬ ಪುಸ್ತಕ ಬರೆದ. ರಣರಂಗದಲ್ಲಿ ಬ್ರಿಟೀಷ್ ಸೈನಿಕರ ವಿರುದ್ಧ ಸೆಣೆಸುತ್ತಲೇ ವೀರಮರಣವನ್ನಪ್ಪಿದ ಟಿಪ್ಪುವಿನಂತಹ ರಾಜ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ ಎಂದು ಹೇಳುತ್ತಾರೆ.

ಹೌದು,ಭಾರತೀಯ ಇತಿಹಾಸದಲ್ಲಿ ಟಿಪ್ಪು ಸುಲ್ತಾನನದು ಒಂದು ಆಕರ್ಷಕ ವ್ಯಕ್ತಿತ್ವ. ಅವರ ಅಲ್ಪಕಾಲಿಕವೂ ಘಟನಾಪೂರ್ಣವೂ ಆದ ಆಳ್ವಿಕೆಯು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಅವರ ಪ್ರಾಮುಖ್ಯವಿರುವುದು ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲವಾದ ವಿರೋಧವನ್ನು ಒಡ್ಡಿದುದರಲ್ಲಿ. ಅವರಷ್ಟು ದುಸ್ಸಾಧ್ಯವಾದ ಶತ್ರುವನ್ನು ಬ್ರಿಟಿಷರು ಎಂದೂ ಎದುರಿಸಲಿಲ್ಲ. ಅವರ ಆಳ್ವಿಕೆ ಪ್ರಾರಂಭವಾಗುವುದು ಇಂಗ್ಲಿಷರ ವಿರುದ್ಧವಾಗಿ ನಡೆದಿದ್ದ ಯುದ್ಧದ ಮಧ್ಯೆ; ಅದು ಕೊನೆಗೊಳ್ಳುವುದೂ ಅವರೆದರು ಮಾಡುತ್ತಿದ್ದ ಯುದ್ಧದ ನಡುವೆಯೇ. ಕನಸುಗಳಲ್ಲೂ ಅವರು ಇಂಗ್ಲಿಷರೊಡನೆ ಮಾಡು–ಮಡಿ ಹೋರಾಟ ನಡೆಸುತ್ತಿದ್ದ. ನರಿಯ ಹಾಗೆ ನೂರುವರ್ಷ ಬದುಕುವುದಕ್ಕಿಂತ ಸಿಂಹದ ಹಾಗೆ ಒಂದು ದಿನ ಬದುಕುವುದೇ ಮೇಲು ಎಂಬುದು ಅವರ ಧ್ಯೇಯವಾಗಿತ್ತು. ಅವರ ಜೀವಿತದ ಧ್ಯೇಯವೇ ಭಾರತದಿಂದ ಇಂಗ್ಲಿಷರನ್ನು ಹೊರಗಟ್ಟುವುದು. ಅದಕ್ಕಾಗಿ ತನ್ನೆಲ್ಲ ಸಾಧನ ಸಂಪತ್ತನ್ನೂ, ಶಕ್ತಿ ಸಾಮರ್ಥ್ಯಗಳನ್ನೂ, ಅಧಿಕಾರವನ್ನೂ ಉಪಯೋಗಿಸಿದ. ಕೊನೆಗೆ ತನ್ನ ಪ್ರಾಣವನ್ನೇ ಒಪ್ಪಿಸಿದ. ಎಂದಿಗೂ ಆ ಗುರಿಯಿಂದ ಅತ್ತಿತ್ತ ಚಲಿಸಲಿಲ್ಲ. ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ವಿದೇಶಿ ಪ್ರಭುತ್ವಕ್ಕೆ ಅಧೀನವಾಗಲಿಲ್ಲ.ಎಷ್ಟೆಂದರೆ ಬ್ರಿಟೀಷರ ವಿರುದ್ದ ಟಿಪ್ಪು ಸುಲ್ತಾನ್ ಸಮರ ಸಾರಿದ ಸಂದರ್ಭದಲ್ಲಿ ಕೊಡಗಿನ ರಾಜನು ಬ್ರಿಟೀಷರ ಪರವಾಗಿದ್ದನು. ಈ ವೇಳೆ ನೆರೆಯ ಕೊಡಗಿನ ರಾಜ ಬ್ರಿಟೀಷರೊಂದಿಗೆ ಕೈಜೋಡಿಸಿದರೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಟಿಪ್ಪು ಸುಲ್ತಾನ್ ಕೊಡಗಿನ ರಾಜನ ವಿರುದ್ದವೂ ಹೋರಾಟ ನಡೆಸಿದ್ದರು.ಅಲ್ಲದೇ,ಉತ್ತರ ಭಾರತವನ್ನು ಸುಲಭವಾಗಿ ಆಕ್ರಮಿಸಿದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಟಿಪ್ಪೂ ಸುಲ್ತಾನನ್ನು ಎದುರಿಸಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಟಿಪ್ಪು ಸಾಹೇಬ್ ಎಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಅಂದಿನ ದಕ್ಷಿಣದ ಪ್ರಾಂತಗಳಾದ ಮದ್ರಾಸ್ ಮತ್ತು ಮಂಗಳೂರು ಪ್ರಾಂತಗಳನ್ನು ಮೊದಲ ಮತ್ತು ಎರಡು ಅಂಗ್ಲೋ ಮೈಸೂರ್ ವಾರ್ (ಅಥವಾ ಅಂಗ್ಲ-ಮೈಸೂರು ಯುದ್ದ) ಗಳಲ್ಲಿ ಬ್ರಿಟಿಷರ ವಿರುದ್ಧ ಸೆಣೆಸಿ ಉಳಿಸಿದ್ದರು.ತಮ್ಮ ನಿಜನಾಮಧೇಯಕ್ಕಿಂತಲೂ ಶೇರ್-ಎ-ಮೈಸೂರ್ (ಮೈಸೂರಿನ ಹುಲಿ) ಎಂಬ ಅಂಕಿತನಾಮದಿಂದಲೇ ಹೆಚ್ಚು ಪ್ರಸಿದ್ಧನಾಗಿದ್ದ ಟಿಪ್ಪು ಸುಲ್ತಾನ್ ಕರ್ನಾಟಕದ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ.

ಅಂದು ಭಾರತದ ಯಾವ ರಾಜ್ಯವೂ ಟಿಪ್ಪು ಸುಲ್ತಾನ್ ಸೆಣಸಿದಷ್ಟು ಯುದ್ಧಗಳಲ್ಲಿ ಪಾಲ್ಗೊಳ್ಳಲಿಲ್ಲ. ಟಿಪ್ಪು ನಾಲ್ಕು ‘ಮೈಸೂರು ಯುದ್ಧ’ಗಳಲ್ಲಿ ಸೆಣಸಾಟ ನಡೆಸಬೇಕಾಯಿತು. ಬೇರೆಯವರು ಯಾವ ಯುದ್ಧಗಳಲ್ಲೂ ಬ್ರಿಟಿಷರನ್ನು ಸೋಲಿಸಿರಲಿಲ್ಲ. ಟಿಪ್ಪು ಮೊದಲ ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಜಯ ಸಾಧಿಸಿದ. ಬ್ರಿಟಿಷರ ಸೈನ್ಯದ ಬಹುತೇಕ ಕಮಾಂಡರ್‌ಗಳನ್ನು ಕೈದಿಗಳನ್ನಾಗಿ ಇರಿಸಿಕೊಂಡ.  ವಸಾಹತುಶಾಹಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಿದ್ದು ಟಿಪ್ಪುವಿನ ಮುಖ್ಯ ಕೊಡುಗೆ. ಟಿಪ್ಪು ಒಳ್ಳೆಯ ಆಡಳಿತಗಾರ ಕೂಡ ಆಗಿದ್ದ. ಒಂದಲ್ಲ, ಹಲವು ಕ್ಷೇತ್ರಗಳಲ್ಲಿ ರಾಜ್ಯವನ್ನು ಆಧುನಿಕಗೊಳಿಸಿದ. ಆಗಿನ ಕಾಲದಲ್ಲಿ ರಾಕೆಟ್ ವ್ಯವಸ್ಥೆಯ ಬಗ್ಗೆ ಯಾರೂ ಆಲೋಚನೆಯನ್ನೇ ಮಾಡಿರಲಿಲ್ಲ. ಟಿಪ್ಪು ಬಳಸಿ ತೋರಿಸಿದ್ದ. ಬಹುತೇಕ ರಾಜರು ನೌಕಾಪಡೆಯ ಬಗ್ಗೆ ಆಲೋಚನೆಯನ್ನೇ ಮಾಡಿರದಿದ್ದ ಹೊತ್ತಿನಲ್ಲಿ, ಅಂದಾಜು ನೂರು ನೌಕೆಗಳ ಪಡೆಯನ್ನು ಟಿಪ್ಪು ಕಟ್ಟಿದ. ಅವುಗಳನ್ನು ಭಾರತದ ವಸ್ತುಗಳನ್ನೇ ಬಳಸಿ ಕಟ್ಟಿದ. ಅವು ಬ್ರಿಟಿಷರ ನೌಕಾಪಡೆಗೆ ಸರಿಸಾಟಿಯಾಗಿದ್ದವು.

ಹಾಗೆಯೇ, ಟಿಪ್ಪು ಆಲೋಚನೆಯಲ್ಲಿ, ಕೃತಿಯಲ್ಲಿ ಒಬ್ಬ ಕ್ರಾಂತಿಕಾರಿಯಾಗಿದ್ದ. ಸಂದರ್ಭ ಹಾಗೂ ಸನ್ನಿವೇಶಗಳು ಎಷ್ಟರಮಟ್ಟಿಗೆ ಆಸ್ಪದ ಕೊಡುತ್ತಿದ್ದವೋ ಅದಕ್ಕಿಂತ ಅತ್ಯಧಿಕವಾಗಿ ಸಾಧಿಸಲು ಅವರು ಬಯಸಿದ. ಕಾಲ ಒಡ್ಡಿದ ಸವಾಲುಗಳು, ಪ್ರತಿರೋಧಗಳು ಅವರನ್ನು ಇನ್ನಷ್ಟು ಚುರುಕಾಗಿ ಕೆಲಸ ಮಾಡುವಂತೆ ಕೆರಳಿಸುತ್ತಿದ್ದವು. ಅವರಲ್ಲಿ ಪ್ರಧಾನವಾಗಿದ್ದ ಪ್ರವೃತ್ತಿ ಬದಲಾವಣೆಯ ಹಂಬಲ. ಸ್ವಾತಂತ್ರ್ಯ ಮತ್ತು ಆತ್ಮಗೌರವಗಳಿಲ್ಲದೆ ಹೋದರೆ ಬದುಕುವುದೇ ವ್ಯರ್ಥ ಎಂಬ ತತ್ವವನ್ನು ಜನರಲ್ಲಿ ಮೂಡಿಸಲು ಯತ್ನಿಸಿದ್ದ. ಉದಾತ್ತ ಉದ್ದೇಶಕ್ಕಾಗಿ ಬದುಕಬೇಕು ಮತ್ತು ಅದಕ್ಕಾಗಿಯೇ ಸಾಯಬೇಕು ಎಂಬ ಸಂದೇಶವನ್ನು ಕೊಟ್ಟವರಾಗಿದ್ದರು.

ಹದಿನೆಂಟನೆಯ ಶತಮಾನದ ಇತಿಹಾಸವನ್ನು ಪರಿಗಣಿಸಿದರೆ ಭಾರತದಾದ್ಯಂತ ರಾಜರ, ಸಾಮಂತರ ಆಳ್ವಿಕೆ ಜಾರಿಯಲ್ಲಿತ್ತು. ವೈರತ್ವ ಮತ್ತು ಮಿತೃತ್ವಗಳನ್ನು ನಿಭಾಯಿಸಲು ಯುದ್ಧಗಳು ನಡೆಯುವುದು ಸಾಮಾನ್ಯವಾಗಿತ್ತು. ಇಬ್ಬರು ಸ್ನೇಹಿತರ ನಡುವೆ ವೈರತ್ವ ಹುಟ್ಟುಹಾಕಿ ಇಬ್ಬರ ಜಗಳದಿಂದ ಲಾಭ ಪಡೆಯುವ 'ಒಡೆದು ಆಳುವ ನೀತಿ'ಯನ್ನು ಅನುಸರಿಸಿದ ಬ್ರಿಟಿಷರು ತಮ್ಮ ಯೋಜನೆಯಲ್ಲಿ ಬಹುತೇಕ ಯಶಸ್ವಿಯೂ ಆದರು.(ಹೀಗೆಯಾಗಿದೆ ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯೆಂದು ಬಿಂಬಿತವಾಗಿರುವುದು) ಆದರೆ, ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ನಿಂತು ಅವರ ಆಕ್ರಮಣವನ್ನು ಎದುರಿಸಿ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯತ್ನಿಸಿದ ಮಹಾನ್ ವ್ಯಕ್ತಿಗಳಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಸ್ಥಾನದಲ್ಲಿದ್ದಾರೆಯೆಂದು ಹೇಳಿದರೆ ತಪ್ಪಾಗಲಾರದು. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತಲ ರಾಜರ ಮತ್ತು ಸಾಮಂತರಲ್ಲಿ ಒಗಟ್ಟು ಮೂಡಿಸಿ ದಕ್ಷಿಣ ಭಾರತವನ್ನೇ ಬ್ರಿಟಿಷರ ತೆಕ್ಕೆಯಿಂದ ರಕ್ಷಿಸಿಕೊಂಡ ಕಾರಣಕ್ಕಾಗಿಯೇ ಅವರಿಗೆ ಶೇರ್-ಎ-ಹಿಂದ್ (ಭಾರತದ ಹುಲಿ) ಮತ್ತು ಶೇರ್-ಎ-ಮಷ್ರಿಖ್ (ಪೂರ್ವದ ಹುಲಿ) ಎಂಬ ಇನ್ನೆರಡು ಅಂಕಿತನಾಮಗಳೂ ಲಭಿಸಿವೆ.

*ಎಂ.ಎ ಮುಜೀಬ್ ಅಹಮದ್* 

Mujeebahmad1997@gmail.com